Category: 9.ನನ್ನ ಅಂಕಣ


ಷೇರು ಮಾರುಕಟ್ಟೆ ಎಂಬ ಸಾಗರದಾಳದಲ್ಲಿ………………………

ಸಂಚಿಕೆ -೧
ಷೇರು ಮಾರುಕಟ್ಟೆ ಎಂಬುದು ಬಂಗಾರದ ಮೊಟ್ಟೆ ಇಡುವ ಕೋಳಿಯೇ? – ಜನಸಾಮಾನ್ಯರ ತಪ್ಪು ಕಲ್ಪನೆಗಳು
————————————————————————————————————-
ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯು ತೀವ್ರಗತಿಯ ಕುಸಿತ ಕಾಣುತ್ತಿದ್ದು ಹೆಚ್ಹಿನ ಸಣ್ಣ ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಹಾಗೂ ಹಣ ಕಳೆದುಕೊಂಡಿರುವವರು ಹತಾಶರಾಗಿ ಷೇರು ಮಾರುಕಟ್ಟೆಯನ್ನು ಶಪಿಸುತ್ತಿರುವುದು ಸಾಮಾನ್ಯವಾದ ದೃಶ್ಯವಾಗಿದೆ.

ಈ ಸಂದರ್ಭದಲ್ಲಿ ಷೇರು ಮಾರುಕಟ್ಟೆಯು ಮತ್ತೆ ಮತ್ತೆ ಏಕೆ ಕುಸಿತ ಕಾಣುತ್ತೆ? ಜನಸಾಮಾನ್ಯರು ಏಕೆ ಹಣ ಕಳೆದುಕೊಳ್ಳುತ್ತಾರೆ? ಷೇರು ಮಾರುಕಟ್ಟೆಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ? ಸಾಮಾನ್ಯ ಜನರು ಷೇರುಮಾರುಕಟ್ಟೆಯಲ್ಲಿ ಲಾಭ ಪಡೆಯುವುದು ಕಷ್ಟ ಸಾಧ್ಯವೇ ? ವಾಣಿಜ್ಯ ವೃತ್ತಪತ್ರಿಕೆಗಳು , ದ್ರಶ್ಯ ಮಾಧ್ಯಮಗಳು , ಬ್ರೋಕರ್ ಗಳು , ಅಪಾರ ಪ್ರಮಾಣದಲ್ಲಿ ಇಂಟರ್ನೆಟ್ ನಲ್ಲಿ ಲಭ್ಯವಿರುವ ಷೇರು ಮಾರುಕಟ್ಟೆ ಕುರಿತ ತಾಣಗಳಲ್ಲಿ ಬರುವ ಅಭಿಪ್ರಾಯಗಳು , ನುರಿತ ತಂತ್ರಜ್ಞರು …………….ಇಷ್ಟು ದೊಡ್ಡ ಗಾತ್ರದ ಸಲಹೆಗಾರರು ಹೆಚ್ಹಿನ ಪ್ರಮಾಣದಲ್ಲಿ ಇರುವಾಗ್ಯೂ, ಒಬ್ಬ ಸಣ್ಣ ಹೂಡಿಕೆದಾರ ಸತತವಾಗಿ ಏಕೆ ಹಣ ಕಳೆದುಕೊಳ್ಳುತ್ತಾನೆ? ಷೇರು ಮಾರುಕಟ್ಟೆ ಏರುಗತಿಯಲ್ಲಿರುವಾಗ ಮಾತ್ರ ಲಾಭಗಳಿಸಬಹುದೇ? ಷೇರು ಮಾರುಕಟ್ಟೆ ಇಳಿಕೆ ಕಾಣುತ್ತಿರುವಾಗ ಲಾಭ ಗಳಿಸುವುದು ಸಾಧ್ಯವಿಲ್ಲವೇ? ಒಬ್ಬ ಸಣ್ಣ ಹೂಡಿಕೆದಾರ ಹೂಡಿಕೆ ಮಾಡಿದ ತಕ್ಷಣ ಮಾರುಕಟ್ಟೆ ಕೆಳಕ್ಕೆ ಬೀಳುವುದೇಕೆ? ಷೇರು ಮಾರುಕಟ್ಟೆ ಎಂದ ತಕ್ಷಣ ಜನ ಭಯಭೀತರಾಗುವುದು ಏತಕ್ಕೆ? ಇವೆಲ್ಲ ಪ್ರಶ್ನೆಗಳು ಜನ
ಸಾಮಾನ್ಯರಲ್ಲಿ ಮೂಡುವುದು ಸಹಜ. ಆದರೆ ಇದಕ್ಕೆ ಸಮರ್ಪಕವಾದ ಉತ್ತರವನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಹೇಳುವವರು ತುಂಬಾ ಕಡಿಮೆ. ಇನ್ನು ಕೆಲವರು ( ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಂಡಿರುವವರು ) ಇದೊಂದು ರಹಸ್ಯ ಹಾಗೂ ಈ ರಹಸ್ಯವನ್ನು ಜನಸಾಮಾನ್ಯರಿಗೆ ತಿಳಿಸಬಾರದು ಎಂಬ ಅಭಿಪ್ರಾಯ ಹೊಂದಿರುತ್ತಾರೆ.

ಈ ಲೇಖನದ ಮಾಲಿಕೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು ಒಂದೊಂದಾಗಿ ಬಿಡಿಸಿ ಸಮರ್ಪಕ ಉತ್ತರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ . ಅಂದ ಹಾಗೆ ನಾವು ಇಲ್ಲಿ ಕೆಲ ಹೊಸ ವಿಷಯಗಳು, ಅಂದರೆ ಒಬ್ಬ ಸಾಮಾನ್ಯ ಹೂಡಿಕೆದಾರನಿಗೆ ಗೊತ್ತಿರದ ಅಥವಾ ಮುಚ್ಚಿಡಲ್ಪಟ್ಟ , ಆದರೆ ಹೂಡಿಕೆಗೆ ಅತಿ ಅವಶ್ಯಕವಾದ ಕೆಲವು ಸಂಗತಿಗಳ ಬಗ್ಗೆ ಕೂಡ ಚರ್ಚಿಸೋಣ.
ಜೊತೆಗೆ ವೈಜ್ಞಾನಿಕ /ತಾಂತ್ರಿಕ ( Technical Analysis ) ವಿಶ್ಲೇಷಣೆ ಎಂದರೇನು?. ಈ ವಿಶ್ಲೇಷಣೆಯ ಸಹಾಯದಿಂದ ಹೇಗೆ ವಹಿವಾಟುದಾರರು (Trader ‘ s ) ಉತ್ತಮ ಲಾಭ ಗಳಿಸುತ್ತಾರೆ ? ಈ ವಿಷಯಗಳ ಬಗ್ಗೆ ಕೂಡ ಮುಕ್ತವಾಗಿ ಚರ್ಚಿಸೋಣ…

ಅದರ ಜೊತೆಗೆ ಹೂಡಿಕೆದಾರ (Investor) ಎಂದರೆ ಯಾರು? ಹಾಗೂ ವಹಿವಾಟುದಾರ (Trader ) ಎಂದರೆ ಯಾರು? ಇವರಿಬ್ಬರ ಮಧ್ಯೆ ವ್ಯತ್ಯಾಸ ಹಾಗೂ ಇವರಿಬ್ಬರ ಹೂಡಿಕೆಯ ಶೈಲಿ,……………… ಇವರಿಬ್ಬರ ಯೋಚನಾ ಧಾರೆ ಹಾಗೂ ಈ ಯೋಚನಾ ಧಾರೆ ಇವರ ಲಾಭ ಹಾಗೂ ನಷ್ಟಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನೂ ಕೂಡ ಸಮರ್ಪಕವಾಗಿ ಚರ್ಚಿಸೋಣ .

ಸಾಮಾನ್ಯವಾಗಿ ಹೆಚ್ಹಿನ ಜನರಲ್ಲಿ ಒಂದು ಭಾವನೆ ಮೊದಲಿನಿಂದಲೂ ಬೆಳೆದು ಬಂದಿದೆ. ಅದೇನೆಂದರೆ ಷೇರು ಮಾರುಕಟ್ಟೆ ಅಂದರೆ ಅದೊಂದು ಜೂಜಿನ ವ್ಯವಸ್ಥೆ ಹಾಗೂ ಅಲ್ಲಿ ಜನಸಾಮಾನ್ಯರು ಹಣವನ್ನು ಭಾರೀ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಾರೆ. ಇಲ್ಲಿ ಹೋದವರೆಲ್ಲ ಹಣ ಕಳೆದುಕೊಂಡೇ ವಾಪಸ್ ಬರುತ್ತಾರೆ. ಆದ ಕಾರಣ ಷೇರು ಮಾರುಕಟ್ಟೆಯಿಂದ ದೂರವಿರಬೇಕು .
ಇನ್ನೊಂದು ಗುಂಪಿನ ಜನ ( ವಾಣಿಜ್ಯ ವೃತ್ತಪತ್ರಿಕೆಗಳು , ದ್ರಶ್ಯ ಮಾಧ್ಯಮಗಳು , ಬ್ರೋಕರ್ ಗಳು ,ಅಪಾರ ಪ್ರಮಾಣದಲ್ಲಿ ಇಂಟರ್ನೆಟ್ ನಲ್ಲಿ ಲಭ್ಯವಿರುವ ಷೇರು ಮಾರುಕಟ್ಟೆ ಕುರಿತ ತಾಣಗಳಲ್ಲಿ ಬರುವ ಅಭಿಪ್ರಾಯಗಳು , ನುರಿತ ತಂತ್ರಜ್ಞರು ಎನ್ನಿಸಿಕೊಂಡವರು ) ಇದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿರುತ್ತಾರೆ. ಇವರಲ್ಲಿ ಹೆಚ್ಚಿನವರು ಹೇಳುವುದು ಏನೆಂದರೆ ಮಾರುಕಟ್ಟೆ ಯಾವತ್ತೂ ಮೇಲಕ್ಕೆ ಏರುತ್ತಲೇ ಇರುತ್ತದೆ. ಹೀಗಾಗಿ, ಮಾರುಕಟ್ಟೆಯು ಪ್ರತಿ ಬಾರಿ ಇಳಿಕೆ ಕಂಡಾಗಲೂ ಖರೀದಿಸಿ!ಖರೀದಿಸಿ! ಖರೀದಿಸಿ!
ಜೊತೆಗೆ ಇವರು ಷೇರು ಮಾರುಕಟ್ಟೆಯಿಂದ ಅಸಾಮಾನ್ಯ ಲಾಭ ( Exraordinay return) ಗಳಿಸಬಹುದೆಂದು ಪ್ರತಿಪಾದಿಸುತ್ತಾರೆ. ಇದಕ್ಕೆ ಸಮರ್ಥನೆ ಎಂಬಂತೆ ಇವರು ಎಷ್ಟೋ ವರ್ಷಗಳ ಹಿಂದಿನ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತಾರೆ. ಈ ಗುಂಪಿನವರು ಇಷ್ಟೆಲ್ಲಾ ಮಾಡುವುದು ತಮ್ಮ ಹೊಟ್ಟೆ ಪಾಡಿಗಾಗಿಯೋ,ಸ್ವಾರ್ಥಕ್ಕಾಗಿಯೋ ಅಥವಾ ಷೇರು ಮಾರುಕಟ್ಟೆಯ ಒಳ ತಂತ್ರಜ್ಞಾನ ( inner mechanism) ದ ತಿಳುವಳಿಕೆ ಇಲ್ಲದಿರುವುದರಿಂದಲೋ …ಯಾವ ಕಾರಣದಿಂದ ಅಂತ ಹೇಳುವುದು ತುಂಬಾ ಕಷ್ಟಕರ. ಜೊತೆಗೆ ಈ ಗುಂಪಿನವರ ಇನ್ನೊಂದು ಘೋಷಣೆ “ಷೇರು ಮಾರುಕಟ್ಟೆ ಯಾವತ್ತೂ ಏರುತ್ತಲೇ ಇರುತ್ತದೆ” ಎನ್ನುವುದನ್ನು ಹೆಚ್ಹಿನ ಸಣ್ಣ ಹೂಡಿಕೆದಾರರು ನಂಬಿ ಹಣ ಹೂಡುತ್ತಾರೆ. ಆದರೆ ಅವರು ಒಂದು ವಿಷಯವನ್ನು ಮರೆತಿರುತ್ತಾರೆ. ಅದೇನೆಂದರೆ ಏರಿಳಿತ ಎನ್ನುವುದು ಪ್ರಕೃತಿಯ ಸಹಜ ನಿಯಮ. ಸಮುದ್ರದ ತೆರೆಗಳು ಸತತವಾಗಿ ಏರಿಳಿತ ಕಂಡರೆ ,ಚಂದ್ರ ಪೂರ್ಣಿಮೆಯಂದು ಏರಿಕೆ ಕಂಡು ಅಮಾವಾಸ್ಯೆಯಂದು ಇಳಿಕೆ ಕಾಣುತ್ತಾನೆ. ಹಾಗೆಯೇ ಗಿಡಮರಗಳು,ಮನುಷ್ಯ, ಪ್ರಾಣಿ ಪಕ್ಷಿಗಳು ಕೂಡ ಸತತವಾಗಿ ಏರಿಳಿತವನ್ನು ಕಾಣುತ್ತಲೇ ಇರುತ್ತವೆ. ದಿನವಿದ್ದಲ್ಲಿ ರಾತ್ರಿ ಇರಲೇ ಬೇಕು. ಹಾಗೆಯೇ ಬೆಳಕು ಇದ್ದ ಮೇಲೆ ಕತ್ತಲೆ ಎನ್ನುವುದೂ ಇರಲೇ ಬೇಕು. ಅದೇ ರೀತಿ ಏರಿಕೆ ಅನ್ನುವುದು ಇದ್ದ ಮೇಲೆ ಇಳಿಕೆ ಅನ್ನುವುದೂ ಕೂಡ ಇರಲೇಬೇಕು. ಈ ನೈಜತೆಯನ್ನು ಅರಿತುಕೊಂಡರೆ ನಮ್ಮ ಹೂಡಿಕೆಯ ಅರ್ಧದಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಆದರೆ ದುರದೃಷ್ಟವಶಾತ್ ಷೇರು ಮಾರುಕಟ್ಟೆ ವಿಷಯಕ್ಕೆ ಬಂದಾಗ ಮಾತ್ರ ನಮ್ಮ ಅಪೇಕ್ಷೆ ಬೇರೆಯೇ ಆಗಿದ್ದು , ಷೇರು ಮಾರುಕಟ್ಟೆ ಗಗನದಷ್ಟು ಎತ್ತರಕ್ಕೆ ಏರುತ್ತಲೇ ಇರಬೇಕೆಂದು ಬಯಸುತ್ತೇವೆ.

ವಾಸ್ತವಿಕವಾಗಿ ಷೇರು ಮಾರುಕಟ್ಟೆಯು ಮೊದಲಿನ ಗುಂಪಿನವರು ನಂಬಿದ ತರಹ ಒಂದು ಭೂತವೂ ಅಲ್ಲ ಹಾಗೂ ಎರಡನೆಯ ಗುಂಪಿನವರು ನಂಬಿರುವಂತೆ ಬಂಗಾರದ ಮೊಟ್ಟೆ ಇಡುವ ಕೋಳಿಯೂ ಅಲ್ಲ. ಷೇರು ಮಾರುಕಟ್ಟೆ ಎಂದರೆ ” ಹಂಚಿಕೆ ( supply ) ಹಾಗೂ ಬೇಡಿಕೆ ( demand ) ಗಳನ್ನು ಅವಲಂಬಿಸಿ ನಿಂತಿರುವ ಒಂದು ಅರ್ಥ ವ್ಯವಸ್ಥೆ “. ಆದರೆ ಇತರೆ ಆರ್ಥಿಕ ವ್ಯವಸ್ಥೆಗಳಂತೆ ಷೇರು ಮಾರುಕಟ್ಟೆಯು ಸ್ಪಷ್ಟ ರಚನೆ ( Clear structure) ಹೊಂದಿಲ್ಲ. ಇದೇ ಕಾರಣಕ್ಕಾಗಿ ಹೆಚ್ಹಿನ ಜನಸಾಮಾನ್ಯರು ಅಂದರೆ ಹೆಚ್ಹು ಕಡಿಮೆ ೯೦ ಪ್ರತಿಶತ ಸಣ್ಣ ಹೂಡಿಕೆದಾರರು ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅರಿತು ಹೂಡಿಕೆ ಮಾಡುವಲ್ಲಿ ವಿಫಲರಾಗುತ್ತಾರೆ.ಕಾರಣ ನಷ್ಟವನ್ನು ಅನುಭವಿಸುತ್ತಾರೆ . ಹಾಗೆಯೇ ಈ ವ್ಯವಸ್ಥೆಯ ಒಳ ಹೊರಗುಗಳನ್ನು ( inner mechanism ) ಅನೇಕ ವರ್ಷಗಳ ಪರಿಶ್ರಮದಿಂದ ಅರಿತು ಹೂಡಿಕೆ ಮಾಡುವವರು ಅಪಾರವಾದ ಲಾಭವನ್ನು ಪಡೆಯುತ್ತಾರೆ.

ಷೇರು ಮಾರುಕಟ್ಟೆಯನ್ನು ತುಂಬಾ ಸರಳವಾಗಿ ಅರಿತುಕೊಳ್ಳಬೇಕೆಂದರೆ ಹೀಗೆ ಮಾಡಿ. ನಿಮ್ಮ ಎರಡೂ ಹಸ್ತಗಳನ್ನು ನಿಮಗೆದುರಾಗಿ ಒಂದಕ್ಕೊಂದು ಒತ್ತಿಕೊಂಡಂತೆ ಹಿಡಿದುಕೊಳ್ಳಿ. ಈಗ ಕೆಳಗಿನ ಚಿತ್ರವನ್ನು ಗಮನಿಸಿ. ನಾನು ಬೆರಳಿನ ಕೆಳಗಿನ ಗಂಟುಗಳನ್ನು 1 ಎಂತಲೂ , ಕೆಳಗಿನಿಂದ ಎರಡನೆಯ ಗಂಟುಗಳನ್ನು 2 ಅಂತಲೂ ,ಬೆರಳಿನ ತುದಿಗಳನ್ನು 3 ಅಂತಲೂ ಗುರುತಿಸಿರುತ್ತೇನೆ. ಈಗ ಗಮನಿಸುತ್ತಾ ಬನ್ನಿ . ಎಡಗೈ ಹೆಬ್ಬೆರಳಿನಿಂದ ಆರಂಭವಾಗಿ ಮಧ್ಯದ ಬೆರಳಿನವರೆಗೂ ಕೆಳಗಂಟು,ಮಧ್ಯದ ಗಂಟು ಹಾಗೂ ಮೇಲ್ತುದಿಗಳು ಮೇಲಕ್ಕೆರುತ್ತಿವೆ. ಇದನ್ನೇ ನಾವು ಏರು ಗತಿ (up trend) ಎನ್ನುತ್ತೇವೆ. ಈಗ ಮಧ್ಯದ ಬೆರಳಿನಿಂದ ಕಿರುಬೆರಳಿನವರೆಗೆ ಕೆಳಗಂಟು,ಮಧ್ಯದ ಗಂಟು ಹಾಗೂ ಮೇಲ್ತುದಿಗಳು ಕೆಳಕ್ಕಿಳಿಯುತ್ತಿವೆ. ಇದನ್ನೇ ನಾವು ಇಳಿಕೆ (down trend) ಎನ್ನುತ್ತೇವೆ. ಹಾಗೆಯೇ ಬಲಗೈ ಕೂಡ ಇದೇ ವಿದ್ಯಮಾನವನ್ನು ಸೂಚಿಸುತ್ತಿರುವುದನ್ನು ತಾವು ಇಲ್ಲಿ ಗಮನಿಸಬಹುದು. ಇದು ಒಂದು ಚಕ್ರವಾಗಿದ್ದು ಎರಿಳಿಕೆಗಳು ನಮ್ಮ ಉಸಿರಿನಷ್ಟೇ ಸಹಜವಾಗಿರುತ್ತವೆ.

ನಮ್ಮ ಕೈನಲ್ಲೇ ಷೇರು ಮಾರುಕಟ್ಟೆ

ನಮ್ಮ ಕೈನಲ್ಲೇ ಷೇರು ಮಾರುಕಟ್ಟೆ

ಗ್ಯಾನ್ ( Gann ) ಎಂಬ ಹೂಡಿಕೆದಾರ , ವಾರ್ರೆನ್ನ್ ಬಫೆಟ್ ತರಹ ಈ ಶತಮಾನ ಕಂಡ ಅತಿ ಶ್ರೇಷ್ಠ ಹೂಡಿಕೆದಾರರಲ್ಲಿ ಒಬ್ಬ. ಆತ ೧೯೦೯ ರಷ್ಟು ಹಿಂದೆಯೇ ಹೀಗೆ ಹೇಳಿದ್ದಾನೆ .

” ನನ್ನ್ನ ಜೀವನದ ಕಳೆದ ಹತ್ತು ವರ್ಷಗಳನ್ನು ಸಂಪೂರ್ಣವಾಗಿ ನಾನು ಈ ಮಾರುಕಟ್ಟೆಯ ಒಳ ಹೊರಗುಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮೀಸಲಿಟ್ಟಿದ್ದೇನೆ. ನಾನೂ ಕೂಡ ಈ ಕ್ಷೇತ್ರಕ್ಕೆ ಬಂದಾಗ ಉಳಿದ ಹೂಡಿಕೆದಾರರಂತೆ ಈ ವಿಷಯದ ಬಗ್ಗೆ ಯಾವುದೇ ಪೂರ್ವ ಜ್ಞಾನವಿಲ್ಲದೇ ಏಳು ಬೀಳುಗಳನ್ನು ಅನುಭವಿಸಿ ,ಸಾವಿರಾರು ಡಾಲರಗಳನ್ನು ಕಳೆದುಕೊಂಡೆ. ನಿಧಾನವಾಗಿ ನನ್ನಲ್ಲಿ ಒಂದು ತಿಳುವಳಿಕೆ ಬರಲಾರಂಭಿಸಿತು. ಅದೇನೆಂದರೆ ……..ಅದು ವೈದ್ಯ ಆಗಿರಬಹುದು,ವಿಜ್ಞಾನಿ ಆಗಿರಬಹುದು ,ಲಾಯರ್ ಆಗಿರಬಹುದು………..ಅವರೆಲ್ಲರೂ ಅವರವರ ಕ್ಷೇತ್ರದ ಬಗ್ಗೆ ಎಷ್ಟೋ ವರ್ಷಗಳ ಸತತ ಪ್ರಯತ್ನ ಹಾಗೂ ಆಳವಾದ ತಿಳುವಳಿಕೆ ಪಡೆದ ನಂತರವೇ ಅವರ ವೃತ್ತಿ ಅವರಿಗೆ ಆದಾಯ ತಂದುಕೊಡಲಾರoಭಿಸುತ್ತದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಮಾತ್ರ ಒಬ್ಬ ಸಾಮಾನ್ಯ ಮನುಷ್ಯ ಯಾವುದೇ ಜ್ಞಾನವಿಲ್ಲದೇ ಹೂಡಿಕೆ ಮಾಡಿ ಲಾಭ ಗಳಿಸಬೇಕೆನ್ನುವ ಅಪೇಕ್ಷೆ ಹೊಂದಿರುತ್ತಾನೆ ಹಾಗೂ ಆತನ ಅಪೇಕ್ಷೆ ಈಡೇರದೆ ಇದ್ದಾಗ ಬಾಹ್ಯ ವಿಷಯಗಳ ಮೇಲೆ ತನ್ನ ಸೋಲಿನ ತಪ್ಪನ್ನು ಹೊರಿಸುತ್ತಾನೆ. ಈ ಚಕ್ರ ತಿರುಗುತ್ತಲೇ ಇರುತ್ತದೆ. “

ಈ ಮಾತು ನಿಜವೆನ್ನುವುದರಲ್ಲಿ ಎರಡು ಮಾತಿಲ್ಲ. ನಾನು ಸ್ವತಃ ನನ್ನ ಸುತ್ತಮುತ್ತಲಿನಲ್ಲಿ ಇಂತಹ ನೂರಾರು ಜನರನ್ನು ನೋಡಿದ್ದೇನೆ. ಆಶ್ಚರ್ಯವೆಂದರೆ ನಾವು ಒಬ್ಬ ಇಂಜಿನೀಯರ್ ಆಗಿ ಸಂಪಾದನೆ ಮಾಡಬೇಕೆಂದರೆ ೬-೮ ವರ್ಷಗಳ ಪ್ರಯತ್ನ ಬೇಕೇ ಬೇಕು. ಡಾಕ್ಟರನಾಗಿ ಸಂಪಾದನೆ ಮಾಡಲೂ ಕೂಡ ಅಷ್ಟೇ ಸಮಯ ತಗಲುತ್ತದೆ. ಒಬ್ಬ ಲಾಯರ್ ಕೂಡ ೮-೧೦ ವರ್ಷ ಅಥವಾ ಹೆಚ್ಹು ಸಮಯವನ್ನೇ ತೆಗೆದುಕೊಳ್ಳುತ್ತಾನೆ. ಆದರೆ ಅದೇ ವ್ಯಕ್ತಿ ಷೇರು ಮಾರುಕಟ್ಟೆಗೆ ಬಂದಾಗ ಮಾತ್ರ ೨ ತಿಂಗಳಲ್ಲಿ ತಾನು ತೊಡಗಿಸಿದ ಹಣ ದ್ವಿಗುಣವಾಗಬೇಕೆಂದು ಬಯಸುತ್ತಾನೆ. ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೂಡ ಇಂಥಹ ಅಭಿಪ್ರಾಯ ಹೊಂದಿರುವ ಬಹಳ ಜನರನ್ನು ನೋಡಿದ್ದೇನೆ. ಕೆಲವರಿಗೆ ಷೇರು ಮಾರುಕಟ್ಟೆ ಅನ್ನುವುದು ಒಂದು ಮೋಜಿನ ಅಡ್ಡೆಯಾದರೆ ಇನ್ನು ಕೆಲವರಿಗೆ ಅದೊಂದು ಹವ್ಯಾಸ. ಇನ್ನು ಕೆಲವರಿಗೆ ಅದೊಂದು ಕ್ಯಾಸಿನೋ ತರಹ. ಇನ್ನು ಕೆಲವರಿಗೆ ಇದೊಂದು ಟೈಮ್ ಪಾಸ್ ಮಾಡುವಂಥಹ ಒಂದು ಕ್ರೀಡೆ…….ಇದನ್ನೆಲ್ಲಾ ಗಮನಿಸಿದಾಗ ಕೆಲವೊಮ್ಮೆ ನಮ್ಮಲ್ಲಿ ಹಣದ ಬಗ್ಗೆ ಹಾಗೂ ಅದರ ಮೌಲ್ಯದ ಬಗ್ಗೆ……ಎಲ್ಲಿಯೂ ( ನಮ್ಮ ಚಿಕ್ಕ ವಯಸ್ಸಿನಲ್ಲಾಗಲಿ ,ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಾಗಲಿ ) ಸಮರ್ಪಕ ತಿಳುವಳಿಕೆಯನ್ನು ನೀಡುವ ವ್ಯವಸ್ಥೆಯ ಕೊರತೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.

ಷೇರು ಮಾರುಕಟ್ಟೆ ಏರಿಕೆ ಕಂಡ ದಿವಸ ದೃಶ್ಯ ಮಾಧ್ಯಮಗಳು, ಇಂಟರ್ನೆಟ್ …ಎಲ್ಲೆಲ್ಲಿಯೂ ಷೇರುಮಾರ್ಕೆಟನ್ನು ಅತಿಯಾಗಿ ಪ್ರಶಂಸೆ ಮಾಡಲಾಗುತ್ತದೆ. ಅದೇ ಷೇರು ಮಾರುಕಟ್ಟೆ ೩೦೦ ಅಂಕ ಇಳಿತ ಕಂಡ ದಿನ ತಾವು ಗಮನಿಸಿರಬಹುದು. ಇದೇ ಮೇಲಿನ ಮಾಧ್ಯಮಗಳು…ತಲೆಯ ಮೇಲೆ ಕೈ ಹೊತ್ತು ಅನೇಕ ಕಂಪ್ಯೂಟರ್ ಮಾನಿಟರ್ ಗಳ ( ಟರ್ಮಿನಲ್ ) ಮುಂದೆ ಕುಳಿತ ಒಬ್ಬ ಷೇರು ದಲ್ಲಾಳಿಯ ದೃಶ್ಯವನ್ನು ಚಿತ್ರಿಸುತ್ತವೆ. ಹಾಗಾದರೆ ಷೇರು ಮಾರುಕಟ್ಟೆ ಯಾವತ್ತೂ ಏರುತ್ತಲೇ ಇರುತ್ತದೆಯೇ? ಷೇರು ಮಾರುಕಟ್ಟೆಯಲ್ಲಿ ಇಳಿಕೆ ಎನ್ನುವ ಶಬ್ದಕ್ಕೆ ಆಸ್ಪದವೇ ಇಲ್ಲವೇ? ಅಥವಾ ಷೇರು ಮಾರುಕಟ್ಟೆ ಹಾಗೂ ಏರಿಕೆ ಇವೆರಡು ಅನ್ವರ್ಥ ನಾಮಗಳು ಎಂದು ನಾವು ಕಲ್ಪಿಸಿಕೊಂಡಿರುವ ಒಂದು ಭ್ರಮೆಯೇ?
ಹಾಗಾದರೆ ಈ ಸಮಸ್ಯೆಗೆ ಪರಿಹಾರವಾದರೂ ಏನು?

ಇದಕ್ಕಿರುವ ಪರಿಹಾರವೆಂದರೆ , ಈ ಏರಿಳಿತಗಳನ್ನು ನಿಭಾಯಿಸುವ ಕಲೆಯನ್ನು ರೂಢಿಸಿಕೊಳ್ಳುವುದು. ಅಷ್ಟೇ ಅಲ್ಲ ಏರಿಳಿತ ಎರಡರಲ್ಲೂ ಅಪಾರ ಲಾಭ ಗಳಿಸಲು ಸಾಧ್ಯವಿದೆ ಎನ್ನುವ ಹೆಚ್ಹಿನ ಹೂಡಿಕೆದಾರರಿಗೆ ತಿಳಿದಿರದ ಸತ್ಯವನ್ನು ತಿಳಿದುಕೊಳ್ಳುವುದು ಹಾಗೂ ಏರಿಕೆ ಹಾಗೂ ಇಳಿಕೆ ಎರಡರಲ್ಲೂ ಲಾಭದಾಯಕವಾಗಿ ಹೂಡಿಕೆ ಮಾಡುವ ಕಲೆಯನ್ನು ರೂಢಿಸಿಕೊಳ್ಳುವುದು.

ಈ ಕಲೆಯನ್ನು ರೂಢಿಸಿಕೊಳ್ಳುವುದು ಹೇಗೆಂದು ಮುಂದಿನ ಮಾಲಿಕೆಗಳಲ್ಲಿ ತಿಳಿಯೋಣ. ………….

ಸರ್ವರಿಗೂ ನನ್ನ ಈ ಹೊಸ ಕನ್ನಡ ಅಂಕಣಕ್ಕೆ ಹಾರ್ದಿಕ ಸ್ವಾಗತಗಳು . ಈ ಅಂಕಣದಲ್ಲಿ ಷೇರು ಮಾರುಕಟ್ಟೆ ,ವಿದೇಶೀ ವಿನಿಮಯ ಮಾರುಕಟ್ಟೆ, ತಾಂತ್ರಿಕ ವಿಶ್ಲೇಷಣೆ,ಹೂಡಿಕೆ, ಹೂಡಿಕೆದಾರರ ಮಾನಸಿಕತೆ,ಮಾರುಕಟ್ಟೆ ಕುಸಿತ ಹೀಗೆ ಅನೇಕ ವಿಚಾರಗಳ ಮೇಲೆ ಲೇಖನ ಮಾಲಿಕೆಗಳನ್ನು ಶೀಘ್ರದಲ್ಲಿಯೇ ಆರಂಭಿಸಲಿದ್ದೇವೆ.

ಮತ್ತೊಮ್ಮೆ ತಮ್ಮೆಲ್ಲರಿಗೂ ಸ್ವಾಗತ .ತಮ್ಮ ಅಭಿಪ್ರಾಯಗಳನ್ನು ಬರೆಯಲು ಮರೆಯದಿರಿ.